ನಮ್ಮ ದೇಶದಲ್ಲಿ ಸಿಗುವ ವಿವಿಧ ಹಣ್ಣು ತರಕಾರಿಗಳನ್ನು ಶೈತ್ಯದಿಂದ, ಡಬ್ಬಗಳಲ್ಲಿ ಸಂಸ್ಕರಿಸುವುದರಿಂದ, ಆರ್ದ್ರೀಕರಿಸುವುದರಿಂದ, ರಾಸಾಯನಿಕಗಳನ್ನು ಸೇರಿಸಿದ ಮೇಣಗಳ ಲೇಪನವನ್ನು ಕೊಡುವುದರಿಂದ ಮುಂತಾಗಿ ಹಲವು ವಿಧಗಳಿಂದ ಹೇಗೆ ಸಂರಕ್ಷಿಸಿ ಹೆಚ್ಚುಕಾಲ ಉಪಯೋಗಿಸಲು ಸಾಧ್ಯವಾಗುವಂತೆ ಮಾಡಬಹುದೆನ್ನುವ ವಿಚಾರವಾಗಿ ಇಲ್ಲಿ ಪ್ರಯೋಗಗಳು ನಡೆಯುತ್ತಿವೆ. ಶೈತ್ಯಾಗಾರಗಳಲ್ಲಿ ಆಯಾ ಹಣ್ಣು ತರಕಾರಿಗಳಿಗೆ ಎಷ್ಟು ಉಷ್ಣಾಂಶ, ತೇವಾಂಶಗಳಿರಬೇಕು, ಡಬ್ಬಗಳನ್ನು ಸಂಸ್ಕರಿಸುವಾಗ ಯಾವ ತೆರನ ಟಿನ್ಪ್ಲೇಟ್ ಉಪಯೋಗಿಸಿ ಎಷ್ಟು ಉಷ್ಣಾಂಶದಲ್ಲಿ ಕಾಯಿಸಬೇಕು ಎಂಬುವುಗಳನ್ನು ನಿರ್ಧರಿಸಲಾಗಿದೆ. ರಾಸಾಯನಿಕ ಮೇಣಗಳನ್ನು ಉಪಯೋಗಿಸುವುದರಿಂದ ಬಾಳೆಹಣ್ಣಿನ ರಫ್ತಿಗೆ ಸಹಾಯವಾಗಿದೆ. ಈಗ ದೇಶದಲ್ಲೆಲ್ಲ ಶೈತ್ಯಾಗಾರಗಳೇರ್ಪಡುತ್ತಿರುವುದರಿಂದ ಈ ಸಂಶೋಧನೆಗಳು ವ್ಯಾಪಾರಗಾರರಿಗೆ ಸಹಾಯಮಾಡುತ್ತಿವೆ. 
ಇದಲ್ಲದೆ, ಹಣ್ಣಿನ ಉತ್ಪನ್ನಗಳು, ಪರಂಗಿ, ಬೇಲದ ಹಣ್ಣು, ನಿಂಬೆ ಹಣ್ಣಿನ ಸಿಪ್ಪೆ ಮುಂತಾದುವುಗಳಿಂದ ಪೆಕ್ಟಿನ್ ಪದಾರ್ಥ ತಯಾರಿಸುವ ವಿಧಾನ, ನೀರನ್ನು ಸೈನಿಕರಿಗಾಗಿ ಡಬ್ಬದಲ್ಲಿ ಸಂಸ್ಕರಿಸಿಡುವ ವಿಧಾನ ಮುಂತಾದ ಉಪಯುಕ್ತ ಸಂಶೋಧನೆಗಳೂ ಈ ವಿಭಾಗದಲ್ಲಿ ಆಗಿವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ